ಮತ್ಸ್ಯನ್ಯಾಯ  -		
ದೊಡ್ಡಮೀನು ಸಣ್ಣಮೀನನ್ನು ನುಂಗುವ ಕ್ರಿಯೆಯನ್ನು ಹೇಳುವ ನ್ಯಾಯದಲ್ಲಿಯ ಆಲಂಕಾರಿಕ ಮಾತು. ರಾಜ್ಯದಲ್ಲಿ ಅರಾಜಕ ಪರಿಸ್ಥಿತಿಯಿದೆ ಎಂಬುದನ್ನು ಆಲಂಕಾರಿವಾಗಿ ತಿಳಿಸಲು ಈ ಪದವನ್ನು ಭಾರತೀಯ ರಾಜನೀತಿಶಾಸ್ತ್ರದಲ್ಲಿ ಹಿಂದಿನಿಂದಲೂ ಬಳಸಲಾಗಿದೆ. ಬಲವೊಂದೇ ನ್ಯಾಯ ಎಂಬ ಪರಿಸ್ಥಿತಿಯಲ್ಲಿ ಮನುಷ್ಯರು ಒಬ್ಬರನ್ನೊಬ್ಬರು ತಿಂದುಹಾಕುತ್ತಿದ್ದರು. ಇದನ್ನು ಹಾಬ್ಸ್‍ನ ಸಿದ್ಧಾಂತದ ರೀತ್ಯ ಪರಿಭಾವಿಸಿದ ಸಂಗತ ಸಮಾಜಕ್ಕೆ ಪೂರ್ವಭಾವೀ ರಾಜ್ಯ ಅಥವಾ `ಪ್ರಾಕೃತರಾಜ್ಯ ಎಂದು ಸಾಮಾನ್ಯವಾಗಿ ಹೋಲಿಸಬಹುದು. ಅಂಥ ರಾಜ್ಯದಲ್ಲಿ ಜನಜೀವನ ಏಕಾಂತ, ಕೃಪಣ, ಅಸಹ್ಯ, ಪಾಶವ ಮತ್ತು ಅಲ್ಪದ್ದಾಗಿತ್ತು. ಪ್ರಭುತ್ವದ ವಿಕಾಸಕ್ರಮದಲ್ಲಿ ಮೂರು ಘಟ್ಟಗಳನ್ನು ಕುರಿತು ಮಹಾಭಾರತ ಪ್ರಸ್ತಾವಿಸುತ್ತದೆ. 1. ಧರ್ಮಬದ್ಧವಾಗಿ ನಡೆಯುತ್ತಿದ್ದ ಅರಾಜಕ ರಾಷ್ಟ್ರದ ಸ್ವರ್ಣಯುಗದಲ್ಲಿಯ ವ್ಯಕ್ತಿಗಳು ತಮ್ಮ ಸ್ವಂತದ ಹಾಗೂ ಇತರರಿಗೆ ಸಂಬಂಧಪಟ್ಟ ಕರ್ತವ್ಯಗಳ ಅರಿವನ್ನು ಹೊಂದಿದ್ದರು. ಅವರಿಗೆ ರಾಷ್ಟ್ರ ಅಥವಾ ಸರ್ಕಾರ ಮುಂತಾದ ಪ್ರೇರಕ ಸಂಸ್ಥೆಗಳ ಅವಶ್ಯಕತೆ ಇರಲಿಲ್ಲ. 
    
2. ರೂಢಿಯಲ್ಲಿ ಬಂದ ಪ್ರಾಕೃತಿಕ ನಿಯಮಗಳ ಅವನತಿಯಕಾಲ.
    
3 ದೈವನಿಯಮಿತ ಧರ್ಮ ಸಂಸ್ಥಾಪನೆಯಾಗಿ ಅದನ್ನು ಪ್ರಚಾಲಿತಗೊಳಿಸುವ ಪ್ರಭು ನಿಯುಕ್ತನಾಗುವ ಕಾಲ. ಕೌಟಲ್ಯನ     ಅರ್ಥಶಾಸ್ತ್ರದ ಪ್ರಕಾರ ಪ್ರಾಸಂಗಿಕವಾಗಿಯಾದರೂ ಅದು ಈ ಸ್ವರ್ಣಯುಗದ ಮಾತನ್ನು ಎತ್ತುವುದಿಲ್ಲ. ಮತ್ಸ್ಯ ನ್ಯಾಯವನ್ನು ಒಪ್ಪಿದ ಪ್ರಜೆಗಳು ಮನುವನ್ನು ತಮ್ಮ ಪ್ರಭುವಾಗಿ ಮಾಡಿಕೊಂಡರು. ಆ ಪ್ರಭುವಿಗಾಗಿ ಪ್ರಜೆಗಳು ತಾವು ಬೆಳೆಸಿದ ಆರನೆಯ ಒಂದು ಪಾಲು ಧಾನ್ಯವನ್ನು ಹತ್ತನೆಯ ಒಂದು ಪಾಲು ಇತರ ಸಾಮಗ್ರಿಗಳನ್ನು ಮತ್ತು ಹಣವನ್ನು ಮೀಸಲಿಟ್ಟರು. ಇದರಿಂದ ಪೋಷಿತರಾದ ರಾಜರುಗಳು ಮತ್ತು ಪ್ರಜೆಗಳ ಯೋಗಕ್ಷೇಮವನ್ನು ನೋಡಿಕೊಳ್ಳುತ್ತ ಬಂದರು. ಪ್ರಭು ದಂಡವನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಿದ ಹೊರತು ಬಲಶಾಲಿಗಳು ದುರ್ಬಲರನ್ನು ಹಿಂಸಿಸುತ್ತಾರೆ. ಎಂದು ಮನುಸ್ಮøತಿ ತಿಳಿಸುತ್ತದೆ. ಪ್ರಾಕೃತ ಪರಿಸ್ಥಿತಿಯನ್ನು ಸಂಸೃತಿಯನ್ನು ಸಮಾಜವಾಗಿ ಪರಿವರ್ತಿಸಲು ದಂಡವೊಂದಕ್ಕೆ ಸಾಧ್ಯ. ಭಾರತೀಯ ತತ್ತ್ವಜ್ಞರು ರಾಜತ್ವ ಮತ್ತು ದಂಡಗಳು ಬರುವುದಕ್ಕೆ ಮುಂಚೆ ಮತ್ಸನ್ಯಾಯದ ಪರಿಸ್ಥಿತಿ ಇದ್ದೇ ಇರಬೇಕೆಂದು ಪರಿಭಾವಿಸುತ್ತಾರೆ. ಆದರೆ ದೀಘನಿಕಾಯದಲ್ಲಿ ವಿವರಿಸಿರುವ ಬೌದ್ಧರ ಸೀಮಾಪುರುಷ ಸಿದ್ಧಾಂತ ಇಂಥ ಪೂರ್ವಭಾವೀ ಪ್ರಕೃತ ಪರಿಸ್ಥಿತಿ ಇತ್ತೆಂದು ಪರಿಭಾವಿಸುವುದಿಲ್ಲ. 

ಮತ್ಸ್ಯನ್ಯಾಯ ಒಂದು ಕಲ್ಪಿತ ಸಿದ್ಧಾಂತವೇ ಹೊರೆತು ಐತಿಹಾಸಿಕವಾಗಿ ಅಂಥ ಸ್ಥಿತಿ ಒಂದು ಕಾಲದಲ್ಲಿತ್ತೆಂದು ಹೇಳಲು ಬರುವುದಿಲ್ಲ. ನಿಜವಾಗಿ ಹೇಳುವುದಾದರೆ ಸಮಾಜ ಜೀವಿಯಾದ ಮಾನವನ ಸ್ವಭಾವಕ್ಕೂ ಮತ್ಸ್ಯನ್ಯಾಯಕ್ಕೂ ಹೊಂದಿಕೆಯಾಗುವುದಿಲ್ಲ. ದಂಡ ಮತ್ತು  ದಂಡಧಾರರುಗಳಿಲ್ಲದೆ. ನಿರ್ವಾಹವಿಲ್ಲ, ಇವು ಅತ್ಯಂತ ಅವಶ್ಯಕ ಎಂಬುದನ್ನು ಒತ್ತಿ ಹೇಳುವುದಕ್ಕಾಗಿಯೇ ಇದನ್ನು ನಿರೂಪಿಸಲಾಗಿದೆಯೆಂದು ಪರಿಭಾವಿಸಬಹುದು. ಹಿಂದೂ ಸಾತ್ತ್ವಿಕರು ಮತ್ಸ್ಯನ್ಯಾಯ ಅಥವಾ ಅರಾಜಕ ಪರಿಸ್ಥಿತಿಗೆ ತುಂಬ ಆತಂಕಗೊಳ್ಳುತ್ತಾರೆ. ಆದರೆ ಇದರ ಪರಿಹಾರ ಸೂಚಿಸುವಲ್ಲಿ ಭೇಷಜ ಪ್ರಭುತ್ವವೊಂದೆಯೇ ಹೊರತು ಬೇರೇನೂ ಇಲ್ಲ. ಕೌಟಲ್ಯ ಮತ್ಸ್ಯನ್ಯಾಯಕ್ಕೆ ಬದಲಾಗಿ ಒಂದು ರೀತಿಯ ಕರಾರಿನ ಮೇಲಣ ದೊರೆತನದ ಸಿದ್ಧಾಂತ ನಿರೂಪಿಸುತ್ತಾನೆ. ಆದರೆ ಇದು ಅಸುಭವವಾದದ್ದು. ಒಂದು ಸಮಯದಲ್ಲಿ ಒಬ್ಬರ ಕತ್ತನ್ನು ಮತ್ತೊಬ್ಬರು ಕತ್ತರಿಸಲು ತೊಡಗಿದವರು; ಮರುಕ್ಷಣದಲ್ಲೇ ಪರಸ್ಪರ ಆಲಂಗಿಸಿಕೊಳ್ಳಲು ಸಮ್ಮತಿಸುತ್ತಾರೆ ಎಂಬ ಮಾತುಕಲ್ಪನೆಗೂ ಮೀರಿದುದು. ಮತ್ಸ್ಯ ನ್ಯಾಯವನ್ನು ಹಿಂದಕ್ಕಟ್ಟಿದ ಪ್ರಭುತ್ವ ಅಥವಾ ದಂಡ ದೈವನಿಯಾಕವಾದ ನಿಯಮ ಎಂದು ಅಂಗೀಕರಿಸುವುದು ಅನಿವಾರ್ಯ.			    		
(ಆರ್.ಎನ್.ಡಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ